    ಮೂಲದೊಡನೆ ಪರಿಶೀಲಿಸಿ

ಎಲ್ಯಾಸ್ಟೊಮರ್: ರಬ್ಬರಿನ ಗುಣಗಳಿರುವ ಸಂಯೋಜಿತ ವಸ್ತು. ಇದರ ವಸ್ತುಗಳಿಗೆ ರಬ್ಬರಿನ ಪ್ರಧಾನ ಲಕ್ಷಣವಾದ ಸ್ಥಿತಿಸ್ಥಾಪಕತೆ ಇದೆ. ನಿರ್ದಿಷ್ಟ ಸಂದರ್ಭಗಳಲ್ಲಿ ರಬ್ಬರಿಗಿಂತ ಇವುಗಳ ಉಪಯುಕ್ತತೆ ಹೆಚ್ಚು. 1930ರಿಂದಲೂ ಇವು ಮಾರುಕಟ್ಟೆಯಲ್ಲಿವೆ. ಆದರೆ ಎಲ್ಯಾಸ್ಟೊಮರುಗಳ ಉತ್ಪಾದನೆಯಲ್ಲಿ ಸ್ಪಷ್ಟ ಏರಿಕೆಯಾದದ್ದು ಎರಡನೆಯ ಮಹಾಯುದ್ಧದ ತರುವಾಯ. ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜರ್ಮನಿ, ಕೆನಡ ಮತ್ತು ರಷ್ಯಗಳು ಇವನ್ನು ಉತ್ಪಾದಿಸುವ ಪ್ರಮುಖ ದೇಶಗಳು. ರಬ್ಬರಿನಂಥ ವಸ್ತುಗಳನ್ನು ಸಂಯೋಜಿಸಬಹುದೆಂಬ ತತ್ತ್ವ ಇತ್ತೀಚಿನ ಶೋಧವೇನೂ ಅಲ್ಲ. 1879ರಲ್ಲಿಯೇ ಫ್ರಾನ್ಸಿನ ಜಿ.ಬೂಕಾರ್ಟಿ ಐಸೊಪ್ರೀನ್ ಮತ್ತು ಹೈಡ್ರೊಕ್ಲೋರಿಕಾಮ್ಲದ ವರ್ತನೆಯಿಂದ ಅಂಥದೊಂದು ವಸ್ತುವನ್ನು ತಯಾರಿಸಿದ್ದ. ಪ್ರಾಯಶಃ ಈ ಕ್ರಿಯೆ ನಡೆದಾಗ ಐಸೊಪ್ರೀನಿನ ಒಂದು ಭಾಗ ವಾಯುಮಂಡಲದ ಆಕ್ಸಿಜನ್ನಿನಿಂದ ಪೆರಾಕ್ಸೈಡಿಗೆ ಉತ್ಕರ್ಷಿತವಾಗಿತ್ತೆಂದು ತೋರುತ್ತದೆ. ಅದು ಬಹ್ವಂಗೀಕರಣ ಕ್ರಿಯೆಗೆ (ಪಾಲಿಮರೈಸೆûೕಷನ್) ವೇಗವರ್ಧಕವಾಗಿ ಪರಿಣಮಿಸಿರಬೇಕು. ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿ 2,3 ಡೈಮೀಥೈಲ್ ಬ್ಯೂಟಾಡಯೀನಿನ ಬಹ್ವಂಗೀಕರಣದಿಂದ ಸಹಸ್ರಾರು ಟನ್ನುಗಳಷ್ಟು ಮೀಥೈಲ್ ರಬ್ಬರನ್ನು ತಯಾರಿಸಿಕೊಂಡಿತೆಂದು ವರದಿಯಾಗಿದೆ. ಸಾರ್ವಜನಿಕ ಉಪಯೋಗಕ್ಕಾಗಿ ಮಾರುಕಟ್ಟೆಗೆ ಬಿಡುಗಡೆಯಾದ ಮೊದಲ ಎಲ್ಯಾಸ್ಟೊಮರ್ ಅಂದರೆ ಥಯೊಕೋಲ್. ಇದರ ಶೋಧವಾದದ್ದು 1930ರಲ್ಲಿ. ಮರುವರ್ಷ ನಿಯೋಪ್ರೀನ್ ಹುಟ್ಟಿತು. ಸು. 1940ರಲ್ಲಿ  ಜರ್ಮನಿ, ರಷ್ಯ ಮತ್ತು ಅಮೆರಿಕ ದೇಶಗಳು ಇತರ ಎಲ್ಯಾಸ್ಟೊಮರಗಳ ಪತ್ತೆಯನ್ನು ಪ್ರಕಟಿಸಿದುವು. ಎರಡನೆಯ ಮಹಾಯುದ್ಧದ ಆದಿಭಾಗದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ದೂರಪ್ರಾಚ್ಯದಿಂದ ರಬ್ಬರಿನ ಪುರೈಕೆ ನಿಂತಿತು. ಇದು ಎಲ್ಯಾಸ್ಟೊಮರುಗಳ ಶೋಧಕ್ಕೆ ಪ್ರೇರಕವಾಯಿತು. 1943ರಲ್ಲಿ ಜಿ ಆರ್ ಎಸ್ (ಗವರ್ನಮೆಂಟ್ ರಬ್ಬರ್-ಸ್ಟೈರೀನ್ನಿಂದ) ಎಂಬ ವಸ್ತು ರೂಪುಗೊಂಡಿತು. ಇಂದಿಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಲು ಬಳಕೆಯಲ್ಲಿರುವ ರಬ್ಬರ್ ಇದೇ. ನೈಸರ್ಗಿಕ ರಬ್ಬರನ್ನು ಎಲ್ಯಾಸ್ಟೊಮರ್ಗಳು ಸರಿಗಟ್ಟಲಾರವು. ಕೆಲವು ಸಂದರ್ಭಗಳಲ್ಲಿ ಮಾತ್ರ ಅವು ಹೆಚ್ಚು ಉಪಯುಕ್ತವೆಂಬುದು ಮುಂದೆ ಸೂಚಿಸಿರುವ ಉದಾಹರಣೆಗಳಿಂದ ಗೊತ್ತಾಗುತ್ತದೆ. ರಬ್ಬರಿನ ತುಂಡೊಂದನ್ನು ಜಗ್ಗಿ ಎಳೆದರೆ ಉಷ್ಣ ಹುಟ್ಟುವುದು (ಜೂಲ್ ಪರಿಣಾಮ). ಸಂಯೋಜಿತ ರಬ್ಬರಿಗೆ ಉಷ್ಣವಾಹಕ ಶಕ್ತಿ ಕಡಿಮೆ. ಹೀಗಾಗಿ ದೊಡ್ಡ ಸಾರಿಗೆ ಟ್ರಕ್ಕುಗಳು ಮತ್ತು ಬಸ್ಸುಗಳ ಟೈರುಗಳಲ್ಲಿ ಚಲನಕಾಲದಲ್ಲಿ ಹುಟ್ಟಿದ ಉಷ್ಣ ವ್ಯಯವಾಗದೆ ಅಲ್ಲೇ ಉಳಿಯುವುದು. ಇದರಿಂದ ಟೈರಿನಲ್ಲಿ ಬಿರುಕುಂಟಾಗಿ ಒಡೆಯುವುದು. ನೈಸರ್ಗಿಕ ರಬ್ಬರಿನಲ್ಲಿ ಉಷ್ಣೋತ್ಪತ್ತಿಯಾಗುವುದು ಕಡಿಮೆ. ಆದ್ದರಿಂದ ದೊಡ್ಡ ಸಾರಿಗೆ ವಾಹನಗಳ ಟೈರುಗಳಿಗೆ ಅದನ್ನೇ ಬಳಸುವುದು ಕ್ಷೇಮ. ಆದರೆ ಸಣ್ಣ ವಾಹನಗಳ ಟೈರುಗಳನ್ನು ಎಲ್ಯಾಸ್ಟೊಮರುಗಳಿಂದ ಮಾಡಲು ಅಡ್ಡಿಯಿಲ್ಲ. ಏಕೆಂದರೆ ಭಾರ ಒತ್ತಡಗಳು ಅಷ್ಟಿಲ್ಲದಿರುವುದರಿಂದ ಹುಟ್ಟುವ ಉಷ್ಣದ ಪ್ರಮಾಣ ಅಲ್ಪ. ಅದೂ ಬೇಗ ವ್ಯಯವಾಗಿ ಟೈರನ್ನು ಘಾಸಿಪಡಿಸುವ ಸಂಭವ ಕಡಿಮೆ. ಸಂಯೋಜಿತ ರಬ್ಬರಿಗಿಂತ ಪ್ರಕೃತಿದತ್ತ ರಬ್ಬರಿಗೆ ಹಿಸ್ಟೆರಿಸಸ್ ಮೌಲ್ಯವೂ ಕಡಿಮೆ. ಇದು ಮಹತ್ತ್ವದ ವಿಷಯ. ರಬ್ಬರಿಗೆ ಸ್ಥಿತಿಸ್ಥಾಪನ ಶಕ್ತಿಯಿರುವುದು ನಿಜ. ಆದರೆ ರಬ್ಬರಿನ ತುಂಡೊಂದನ್ನು ಎಳೆದು ಬಿಟ್ಟರೆ, ಅದರ ಉದ್ದ ಹಿಂದಿನಷ್ಟೇ ಇರದೆ ಸ್ವಲ್ಪ ವ್ಯತ್ಯಾಸವಿರುತ್ತದೆ ಎಂದು ಪ್ರಯೋಗಗಳಿಂದ ದೃಢಪಟ್ಟಿದೆ. ಈ ದೋಷಕ್ಕೆ ಹಿಸ್ಟೆರಿಸಿಸ್ ಎನ್ನುತ್ತಾರೆ. ಈ ಅವಗುಣ ಕಡಿಮೆಯಾಗಿರುವುದು ಅಪೇಕ್ಷಣೀಯ. ಸಂಯೋಜಿತ ರಬ್ಬರಿನ ಉತ್ತಮಕಾರ್ಯನಿರ್ವಹಣೆಗೆ ಹಲವು ನಿದರ್ಶನಗಳಿವೆ. ವಲ್ಕನೈಸ್ ಮಾಡಿದ ನೈಜರಬ್ಬರು ಕೆಲವು ತೈಲಗಳು ಮತ್ತು ಲೀನಕಾರಿಗಳ ಸಂಪರ್ಕದಲ್ಲಿ ವಿಪರೀತ ಉಬ್ಬುವುದು. ಆದರೆ ಎಲ್ಯಾಸ್ಟೊಮರುಗಳಿಗೆ ಈ ಗುಣವಿಲ್ಲ. ಒಂದು ವೇಳೆ ಗಾತ್ರವರ್ಧನೆಯಾದರೂ ಅದು ಅಲ್ಪ. ಎರಡನೆಯದಾಗಿ ಚಲನೆಯಲ್ಲಿ ಉದ್ಭವಿಸುವ ಘರ್ಷಣೆ ಮತ್ತು ವಿಚ್ಛಿದ್ರಕಾರಕ ಶಕ್ತಿಗಳನ್ನು ತಡೆಗಟ್ಟುವ ಸಾಮಥರ್ಯ್‌ ಅವಕ್ಕಿವೆ. ಟೈರುಗಳನ್ನು ಪುನಶ್ಚೇತನಗೊಳಿಸುವ ಹೊಸ ನಮೂನೆಯ ಕುಲುಮೆ ಇಂಗಾಲದ (ಫರ್ನೇಸ್ ಕಾರ್ಬನ್) ಶೋಧವಾಗಿದೆ. ಅದನ್ನು ಅಳವಡಿಸಿದ ವಲ್ಕೊಲಾನ್, ಕೆಮಿಗೆಮ್-ಎಸ್ಎಲ್ ಮತ್ತು ಜಿಆರ್ಎಸ್ ಎಲ್ಯಾಸ್ಟೊಮರುಗಳಿಂದ ಮಾಡಿದ ಟೈರುಗಳು ನೈಸರ್ಗಿಕ ರಬ್ಬರಿನ ಟೈರುಗಳಿಗಿಂತ ಹೆಚ್ಚು ಕಾಲ ಬಾಳುತ್ತವೆ. ಇದು ಅನುಭವವೇದ್ಯ ಸಂಗತಿ. ಅಲ್ಲದೆ ನೈಜರಬ್ಬರಿಗಿಂತ ಬ್ಯೂಟೈಲ್ ರಬ್ಬರಿನ ಮೂಲಕ ಗಾಳಿ ಹಾಯಲು ಹತ್ತುಪಟ್ಟು ಕಷ್ಟವಾಗುತ್ತದೆ. ಆದ್ದರಿಂದ ಮೊಟಾರ್ ವಾಹನಗಳ ಒಳ ಟ್ಯೂಬುಗಳನ್ನು ತಯಾರಿಸಲು ಇದು ಯೋಗ್ಯವಾಗಿದೆ. ವಲ್ಕನೈಸಾದ ರಬ್ಬರು ಬಹುಬೇಗ ಹೊತ್ತಿ ಉರಿಯುವುದು. ಆದರೆ ನಿಯೊಪ್ರೀನ್, ಕೊರೊಸೀಲ್ ಮತ್ತು ಈಚಿನ ಶೋಧವಾದ ಕೆಲ್ಎಫ್ಎಲ್ಯಾಸ್ಟೊಮರುಗಳು ದಹನವಿರೋಧಿಗಳು. ಬಣ್ಣವಿಲ್ಲದಿರುವುದು ಎಲ್ಯಾಸ್ಟೊಮರುಗಳ ಇನ್ನೊಂದು ವೈಶಿಷ್ಟ್ಯ. ತತ್ಪಲವಾಗಿ ಇವು ಇತರ ಬಣ್ಣಗಳನ್ನು ಸುಲಭವಾಗಿ ಗ್ರಹಿಸುತ್ತವೆ. ಆದ್ದರಿಂದ ಟೈರುಗಳನ್ನು ರೂಪಿಸುವಾಗ ವಿವಿಧ ಬಣ್ಣಗಳನ್ನು ಕೂಡಿಸಲು ಅನುಕೂಲವಾಗುತ್ತದೆ. ನೈಜರಬ್ಬರಿನ ಟೈರುಗಳಿಗೆ ಇಂಗಾಲ ಕದಡಿಸಿ ಕಪ್ಪುಬಣ್ಣ ಮಾತ್ರ ಕೊಡಬಹುದು. -250 ಸೆ.ನಲ್ಲಿ ಸಾಮಾನ್ಯ ರಬ್ಬರು ಗಟ್ಟಿಯಾಗಿಬಿಡುತ್ತದೆ. 1200 ಸೆ. ಮೀರಿದಾಗ ಅದನ್ನು ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಸಿಲಿಕೋನ್ ರಬ್ಬರುಗಳು ಮೇಲು. -550 ರಿಂದ 2600 ಸೆ. ವರೆಗಿನ ಉಷ್ಣತಾಮಿತಿಯಲ್ಲೂ ಅವು ತಮ್ಮ ಪ್ರಧಾನ ರಬ್ಬರಿನ ಲಕ್ಷಣಗಳನ್ನು ಕಾಪಾಡಿಕೊಂಡು ಬರುತ್ತವೆ. ರಬ್ಬರೂ ಕೆಲವು ಎಲ್ಯಾಸ್ಟೊಮರುಗಳೂ ವಲ್ಕನೈಸ್ ಮಾಡಿದಮೇಲೆಯೂ ವಾಯುಮಂಡÀಲದಲ್ಲಿರುವ ಓಜೋನಿನ ಸಂಪರ್ಕದಲ್ಲಿ ನಾಶಹೊಂದುತ್ತವೆ. ಹಿಗ್ಗಿದ ಸ್ಥಿತಿಯಲ್ಲಂತೂ ಅವುಗಳಿಗೆ ಓಜೋ಼ನ್ ಮಾರಕವಾಗುತ್ತದೆ. ವಲ್ಕೊಲಾನ್, ಕೆಮಿಗಮ್-ಎಸ್ಎಲ್, ಹೈಪಲಾನ್ ಮತ್ತು ಕೆಲ್ಎಫ್ ಮಾತ್ರ ಓಜೋ಼ನಿನ ಸಂಪರ್ಕದಲ್ಲಿ ಸ್ಥಿರವಾಗಿರುವುವು. ಬ್ಯೂಟೈಲ್ ನಿಯೊಪ್ರೀನ್ ಮತ್ತು ಥಯೊಕೋಲ್ ಮಾತ್ರ ಓಜೋ಼ನಿನ ಪ್ರಭಾವಕ್ಕೆ ಸ್ವಲ್ಪ ಮಣಿಯುವುದುಂಟು. ರಬ್ಬರನ್ನು ಓಜೋ಼ನಿನಿಂದ ರಕ್ಷಿಸುವ ವಸ್ತುಗಳನ್ನು ಈಚೆಗೆ ರೂಪಿಸಲಾಗಿದೆ. ಇವುಗಳಿಗೆ ಓಜೋ಼ನ್ ವಿರೋಧಿಗಳು (ಆಂಟಿಓಜೋ಼ನೆಂಟ್ಸ್‌) ಎಂದು ಹೆಸರು. ಮೇಣದೊಂದಿಗೆ 1:4 ಫಿನಲೀನ್ ಡೈ ಅಮೀನ್ ವ್ಯುತ್ಪನ್ನಗಳನ್ನು ರಬ್ಬರಿನ ಮೂಲ ಮಿಶ್ರಣಕ್ಕೆ ಕೂಡಿಸಿದರೆ ಓಜೋ಼ನ್ ನಿರೋಧಕ ಗುಣ ಪ್ರಾಪ್ತವಾಗುತ್ತದೆ.
ಬ್ಯೂನಾ ಮತ್ತು ಬ್ಯೂಟೈಲ್ ರಬ್ಬರುಗಳ ತಯಾರಿಕೆಗೆ ಮೊದಲು ಬ್ಯೂಟಾಡಯೀನ್ ಮಾಡಿಕೊಳ್ಳಬೇಕು. ನೈಸರ್ಗಿಕ ರಬ್ಬರಿನ ಮೂಲ ಘಟಕವಾದ ಐಸೊಪ್ರೀನ್
ಅಊ2=ಅ-ಅಊ-=ಅಊ2
|
ಅಊ3
ಇದರಲ್ಲಿರುವ ಮೀಥೈಲ್ ಗ್ರೂಪಿನ ಬದಲು ಒಂದು ಹೈಡ್ರೊಜನ್ ಪರಮಾಣುವಿದ್ದರೆ ಬ್ಯೂಟಾಡಯಿನ್ (ಅಊ2=ಅ-ಅಊ-=ಅಊ2) ಆಗುತ್ತದೆ. ಇದನ್ನು ಪೆಟ್ರೋಲಿಯಂ ವಿಭಜನೆಯಿಂದಾಗಲೀ ಅಸಿಟಲೀನಿನಿಂದಾಗಲೀ ತಯಾರಿಸುವುದು ವಾಡಿಕೆ. ಎಥಿಲೀನ್ ಮತ್ತು ಬೆಂಜಿûೕನಿನ ಸಂಯೋಜನೆಯಿಂದ ಸ್ಟೈರೀನ್ ತಯಾರಿಸಬಹುದು. ಸ್ಟೈರೀನ್ ಮತ್ತು ಬ್ಯೂಟಾಡಯಿನ್ ಕೂಡಿ ಬ್ಯೂನಾ-ಎಸ್ ರಬ್ಬರ್ ಉಂಟಾಗುತ್ತದೆ.

                 ಬ್ಯೂನಾ-ಎಸ್
ಉಳಿದ ಎಲ್ಲ ಎಲ್ಯಾಸ್ಟೊಮರಗಳಿಗಿಂತ ಬ್ಯೂನಾ-ಎಸ್ ನೈಸರ್ಗಿಕ ರಬ್ಬರನ್ನು ಹೆಚ್ಚು ಹೋಲುವುದರಿಂದ 
ಮೋಟಾರು ಟೈರುಗಳನ್ನು ಮಾಡಲು ಇದನ್ನೇ ವಿಶೇಷವಾಗಿ ಉಪಯೋಗಿಸುತ್ತಾರೆ.

 		   ಬ್ಯೂನಾ-ಎಸ್
ಅಕ್ರಿಲೊನೈಟ್ರೀಲ್ ತಯಾರಿಸಲು ಎರಡು ವಿಧಾನಗಳಿವೆ. ಚಿತ್ರ 2ರಲ್ಲಿ ಕಾಣಿಸಿರುವ ಅಕ್ರಿಲೊನೈಟ್ರೇಟನ್ನು ಟ್ಯೂಟಾಡಯಿನಿನೊಡನೆ ಕೂಡಿಸಿ ಸಹಬಹ್ವಂಗೀಕರಣ ಕ್ರಿಯೆಗೆ (ಕೋಪಾಲಿಮರೈಸೇóಷನ್) ಗುರಿಪಡಿಸಿದರೆ ಬ್ಯೂನಾ-ಎನ್ ಲಭಿಸುವುದು.
ಇದಕ್ಕೆ ಪೆಟ್ರೋಲಿಯಂ ವ್ಯುತ್ಪನ್ನಗಳ ಲೀನಕಾರಿ ಪ್ರಭಾವವನ್ನು ಎದುರಿಸುವ ಶಕ್ತಿಯಿದೆ. ಆದ್ದರಿಂದ ಪೆಟ್ರೋಲ್ ಒದಗಿಸುವ ಕೊಳಾಯಿಗಳು, ಕೇಬಲ್ ಹೊದಿಕೆಗಳು ಮೊದಲಾದುವನ್ನು ಮಾಡಲು ಬ್ಯೂನಾ-ಎನ್ ಎಲ್ಯಾಸ್ಟೊಮರ್ ಉಪಯೋಗಿಸುತ್ತಾರೆ.
ಪೆಟ್ರೋಲಿಯಂ ವಿಭಜನೆಯಿಂದ ಲಭ್ಯವಾದ ಐಸೊಬ್ಯುಟಿಲೀನನ್ನು ಬ್ಯೂಟಾಡಯಿನಿ ನೊಡನೆ ಬಹ್ವಂಗೀಕರಿಸಿದಾಗ ಬ್ಯೂಟೈಲ್ ರಬ್ಬರು ದೊರೆಯುತ್ತದೆ.

		  ಬ್ಯೂಟೈಲ್ 	  ಎಲ್ಯಾಸ್ಟೊಮರ್
ನೈಜರಬ್ಬರಿನಂತೆ ಇದಕ್ಕೂ ಸಹ ಪೆಟ್ರೋಲಿಯಂ ವ್ಯುತ್ಪನ್ನಗಳ ಲೀನಕಾರಿ ಪ್ರಭಾವವನ್ನು ಎದುರಿಸುವ ಸಾಮಥರ್ಯ್‌ ಅಷ್ಟಾಗಿಲ್ಲ. ಆದರೆ ಬೆಳಕು ಮತ್ತು ಆಕ್ಸಿಜನ್ನಿನ ಪ್ರಭಾವವನ್ನು ಸಹಿಸಬಲ್ಲುದು. ಇದರ ಮೂಲಕ ಅನಿಲಗಳು ಹಾಯಲಾರವು. ಟೈರುಗಳು ಟ್ಯೂಬುಗಳು ಮತ್ತು ಹಬೆಯ ವಾಹಕ ನಳಿಗೆಗಳನ್ನು ಮಾಡಲು ಇದು ಅನುಕೂಲ. ವೇಗವರ್ಧಕದ ಸಂಪರ್ಕದಲ್ಲಿ ಅಸಿಟಲೀನಿನ ಎರಡು ಅಣುಗಳು ಕೂಡಿ ವೀನೈಲ್ ಅಸಿಟಲೀನ್ ಆಗುತ್ತದೆ. ಕ್ಯುಪ್ರಸ್ ಮತ್ತು ಪೊಟ್ಯಾಸಿಯಂ ಕ್ಲೋರೈಡುಗಳನ್ನು ಅಮೋನಿಯಂ ಕ್ಲೋರೈಡ್ ದ್ರಾವಣದಲ್ಲಿ ವಿಲೀನಗೊಳಿಸಿ ವೇಗವರ್ಧನಕ್ಕೆ ಉಪಯೋಗಿಸುತ್ತಾರೆ. ಉಷ್ಣತೆಯನ್ನು 55ಲಿ-65ಲಿ ಸೆ. ಮಿತಿಯಲ್ಲಿಡಬೇಕು. ಕ್ರಿಯೆ ನಡೆಯಲು ತಾಮ್ರದ ಪಾತ್ರೆ ಅಗತ್ಯ.

ಕ್ಯುಪ್ರಸ್ ಕ್ಲೋರೈಡಿನ ದ್ರಾವಣವನ್ನು ವೇಗವರ್ಧಕವಾಗಿಟ್ಟುಕೊಂಡು ಉಷ್ಣತೆಯನ್ನು 35ಲಿ-45ಲಿ ಸೆ. ಮಿತಿಯಲ್ಲಿ ನಿಯಂತ್ರಿಸಿ ತಣ್ಣಗಿರುವ ಹೈಡ್ರೊಕ್ಲೋರಿಕಾಮ್ಲ ವನ್ನು ಸೇರಿಸಿದರೆ ವೀನೈಲ್ ಅಸಿಟಲೀನ್ ಕ್ಲೋರೊಪ್ರೀನ್ ಆಗಿ ಪರಿವರ್ತಿತವಾಗಬಹುದು.

			 ಕ್ಲೊರೊಪ್ರೀನ್
ಕ್ಲೊರೊಪ್ರೀನ್ ಬಹ್ವಂಗೀಕರಿಸಿ ನಿಯೊಪ್ರೀನ್ ಕೊಡುತ್ತದೆ. 
 
				    ನಿಯೊಪ್ರೀನ್
ಇದರ ಉತ್ಪಾದನೆ ದುಬಾರಿ. ಕೇವಲ ಉಷ್ಣದಿಂದ ಇದು ವಲ್ಕನೈಸಾಗುತ್ತದೆ. ಆದರೆ ಲೋಹದ ಆಕ್ಸೈಡುಗಳನ್ನು ಸೇರಿಸಿದರೆ ವಲ್ಕನೈಸೇóಷನ್ ಕ್ರಿಯೆ ತ್ವರಿತಗೊಳ್ಳುವುದು. ಮೆದುವಾದ ರಬ್ಬರನ್ನು ಮಾತ್ರ ಇದರಿಂದ ಮಾಡಲು ಸಾಧ್ಯ. ಎಣ್ಣೆಗಳು ಮತ್ತು ತೀಕ್ಷ್ಣ ಸ್ವಭಾವದ ಅನಿಲಗಳನ್ನು ಒಯ್ಯುವ ಕೊಳಾಯಿಗಳನ್ನು ತಯಾರಿಸಲು ಈ ರಬ್ಬರು ಪ್ರಶಸ್ತವಾಗಿದೆ.
ರಬ್ಬರಿನ ಗುಣವಿರುವ ಅನೇಕ ಸಾವಯವ ಪಾಲಿಸಲ್ಫೈಡುಗಳಿವೆ. ಬ್ಯೂನಾ ಮತ್ತು ಬ್ಯೂಟೈಲ್ ಎಲ್ಯಾಸ್ಟೊಮರಗಳು ಸಹ ಬಹ್ವಂಗೀಕಾರಿಗಳಾದರೆ, ನಿಯೊಪ್ರೀನ್ ಕೇವಲ ಬಹ್ವಂಗೀಕಾರಿ. ಆದರೆ ಈ ಪಾಲಿಸಲ್ಫೈಡ್ ಎಲ್ಯಾಸ್ಟೊಮರಗಳು ಸಾಂದ್ರೀಕರಣ ಬಹ್ವಂಗೀಕರಣದಿಂದಾದವು (ಕಂಡೆನ್ಸೇಷನ್ ಪಾಲಿಮರೈಸೇಷನ್). ಅಂದರೆ ಮೂಲ ಪದಾರ್ಥಗಳು ಸಂಯೋಜಿಸಿದಾಗ ಕ್ರಿಯೆಯಲ್ಲಿ ಬೇರೊಂದು ವಸ್ತು ಕಳೆಯುವ ಸಂದರ್ಭವಿದು. ಇದಕ್ಕೆ ಥಯೊಕೋಲ್-ಬಿ ಉತ್ತಮ ನಿದರ್ಶನ. ಪೆಟ್ರೋಲಿಯಂ ವ್ಯುತ್ಪನ್ನಗಳಿಂದ ಪಡೆದ ಡೈಕ್ಲೋರೋ ಡೈ ಈಥೈಲ್ ಈಥರನ್ನು ಸೋಡಿಯಂ ಟೆಟ್ರಸಲ್ಫೈಡಿನೊಡನೆ ಬಹ್ವಂಗೀಕರಿಸಿ ಥಯೊಕೋಲ್-ಬಿ ಮಾಡುತ್ತಾರೆ.
ಥಯೊಕೋಲ್ ರಬ್ಬರನ್ನು ವಲ್ಕನೈಸ್ ಮಾಡಲು ಲೋಹದ ಆಕ್ಸೈಡುಗಳನ್ನು ಉಪಯೋಗಿಸುತ್ತಾರೆ. ನಿಯೊಪ್ರೀನಿನಂತೆ ಇದು ಸಹ ಮೆದುವಾದ ವಸ್ತು. ಪೆಟ್ರೋಲ್, ಎಣ್ಣೆಗಳು, ಬೆಂಜೀ಼ನ್ ಮೊದಲಾದ ಲೀನಕಾರಿಗಳು ಇದರ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಆದ್ದರಿಂದ ಪೆಟ್ರೋಲ್ ವಾಹಕ ಕೊಳಾಯಿಗಳು ಮತ್ತು ಕೇಬಲ್ ಹೊದಿಕೆಗಳನ್ನು ಇದರಿಂದ ಮಾಡಬಹುದೇ ವಿನಾ ಮೋಟಾರ್ ಟೈರುಗಳನ್ನಲ್ಲ.
ಕ್ಲೋರೋಟ್ರೈಫ್ಲೋರೋ ಎಥಿಲೀನ್ ಮತ್ತು ವಿನಿಲಿಡೀನ್ ಫ್ಲೋರೈಡ್ ಕೂಡಿದಾಗ ಕೆಲ್ಎಫ್ ಎಲ್ಯಾಸ್ಟೊಮರ್ ದೊರೆಯುತ್ತದೆ. ಇದು ಫ್ಯೂಮಿಂಗ್ ನೈಟ್ರಿಕಾಮ್ಲದ ವರ್ತನೆಯನ್ನು 140 ದಿವಸಗಳ ಕಾಲ ಸಹಿಸಬಲ್ಲದು.
ಪ್ರಕೃತಿದತ್ತವಾದ ರಬ್ಬರಿನಲ್ಲಿರುವ ಸಿಸ್-ಪಾಲಿಐಸೊಪ್ರೀನ್ ಹೈಡ್ರೊಕಾರ್ಬನ್ನನ್ನು ಸಂಯೋಜಿಸಲಾಗಿದೆ. ಇದಕ್ಕೆ ಅಮೆರಿಪೋಲ್-ಎಸ್ಎನ್ ಎಂದು ಹೆಸರು. ತಯಾರಿಕಾ ವಿವರಗಳು ಉದ್ಯಮ ರಹಸ್ಯವಾದ್ದರಿಂದ ಅಲಭ್ಯ.	(ಎಚ್.ಜಿ.ಎಸ್.)
ಎಲ್ಯೂಟ್ರಿಯೇಷನ್: ನೀರನ್ನು ಉಪಯೋಗಿಸಿ ಒಂದು ಗೊತ್ತಾದ ಪ್ರಮಾಣದ ಪದಾರ್ಥವನ್ನು ಸಂಪುರ್ಣವಾಗಿ ವಿಂಗಡಿಸುವ ಕ್ರಮಕ್ಕೆ ಸಾಮಾನ್ಯವಾಗಿ ಇರುವ ಹೆಸರು. ಇದರಿಂದ ಆ ಪದಾರ್ಥದ ವಿವಿಧ ಕಣಗಳ ಗಾತ್ರಗಳನ್ನು, ಮುಖ್ಯವಾಗಿ ಅತಿ ಸಣ್ಣ ಜರಡಿಗಿಂತ ಚಿಕ್ಕದಾದ ಕಣಗಳ ಗಾತ್ರಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಆಂಡ್ರ್ಯೂಸ್ ಕೈನೆಟಿಕ್ ಎಲ್ಯೂಟ್ರಿಯೇಷನ್, ಶುಷ್ಕ ಎಲ್ಯೂಟ್ರಿಯೇಷನ್ ಮತ್ತು ರೋಲರ್ ಕಣಗಾತ್ರ ವಿಭಾಜಕ (ರೋಲರ್ ಪಾರ್ಟಿಕಲ್ ಸೈeóï ಅನಲೈಸóರ್)-ಇವು ಇದರಲ್ಲಿ ಕೆಲವು ವಿಧಾನಗಳು. ಅದಿರುಗಳನ್ನು ಸಾಂದ್ರೀಕರಿಸುವುದರಲ್ಲಿ ಇವು ಬಹು ಮುಖ್ಯವಾದ ಮಾರ್ಗಗಳು.				     (ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ